ಕೀತ್, ಸರ್ ಆರ್ಥರ್

 1866-1955. ಅಂಗರಚನಾಶಾಸ್ತ್ರ ಮತ್ತು ಭೌತಮಾನವಿಜ್ಞಾನಗಳಲ್ಲಿ ಪ್ರಸಿದ್ಧ ಪಂಡಿತನಾಗಿದ್ದು ತನ್ನ ಗ್ರಂಥಗಳಿಂದಲೂ ಇತರ ಸಾಮಾಜಿಕ ಕೆಲಸಕಾರ್ಯಗಳಿಂದಲೂ ಖ್ಯಾತನಾದ ವಿದ್ವಾಂಸ. ಜಾನ್ ಕೀತ್ ಮತ್ತು ಜೆಸ್ಸಿ ಮ್ಯಾಕ್‍ಫರ್‍ಸನ್ ಎಂಬ ಸ್ಕಾಟಿಷ್ ದಂಪತಿಗಳ ಹತ್ತು ಮಕ್ಕಳಲ್ಲಿ ಈತ ಆರನೆಯವ. 1866ನೆಯ ಫೆಬ್ರುವರಿ 5ರಂದು ಸ್ಕಾಟ್ಲೆಂಡಿನ ಅಬರ್ಡೀನ್‍ಗೆ ಉತ್ತರಕ್ಕೆ ಇರುವ ಓಲ್ಡಮಚಾರ್ ಎಂಬಲ್ಲಿ ಜನ್ಮವೆತ್ತಿದ. ಚಿಕ್ಕಂದಿನಲ್ಲಿ ಇವನಿಗೆ ಜಮೀನು ಮೇಲ್ವಿಚಾರಣೆಯ ಕೆಲಸವನ್ನು ವಹಿಸಲಾಗಿತ್ತು. ಈತನಿಗೆ ಪಂಡಿತ ಭಾಷೆಗಳಾಗಿದ್ದ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಅಷ್ಟೊಂದು ಪರಿಶ್ರಮವಿಲ್ಲದಿದ್ದುದೇ ಇದಕ್ಕೆ ಕಾರಣ. ಆದರೂ ಈತ ವೈದ್ಯವಿಭಾಗದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಅಬರ್ಡೀನ್ ವಿಶ್ವವಿದ್ಯಾಲಯದ ವೈದ್ಯಕೀಯ ಪದವಿಗಳಿಸಿದ. ಅನಂತರ ಲಂಡನ್ ಮತ್ತು ಲೀಪ್‍ಜಿಗ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ನಡೆಸಿದ.

 1899ರಲ್ಲಿ ಸಿಸೀಲಿಯ ಎಂಬಾಕೆಯನ್ನು ಮದುವೆಯಾದ. ಅನಂತರ ಸಯಾಂನಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ. ಪಕ್ಕದ ಅರಣ್ಯಗಳಲ್ಲಿದ್ದ ವಾನರವರ್ಗದ ದೇಹರಚನೆಯನ್ನು ಕುರಿತು ಆಳವಾದ ಅಧ್ಯಯನ ನಡೆಸಿದ್ದು ಇದೇ ಅವಧಿಯಲ್ಲಿ. ಈ ವಿಷಯದ ಆಳವಾದ ವ್ಯಾಸಂಗದಿಂದಾಗಿ ಈತನಿಗೆ ಮಾನವನ ಉಗಮ ಮತ್ತು ಬುಡಕಟ್ಟುಗಳ ಮೂಲಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿತು. ಈತನ ಆರೋಗ್ಯ ಯಾವಾಗಲೂ ಅಂಥ ಹೇಳಿಕೊಳ್ಳುವ ಸ್ಥಿತಿಯಲ್ಲಿದ್ದಿರಲಿಲ್ಲ. ಆದರೂ 89 ವರ್ಷಗಳಷ್ಟು ಸುದೀರ್ಘ ಜೀವನವನ್ನು ಈತ ನಡೆಸಿದ. ಆಶ್ಚರ್ಯದ ಸಂಗತಿಯೆಂದರೆ, ತನ್ನ ಸಾಧಾರಣ ಆರೋಗ್ಯದಿಂದಲೇ ಕ್ಷಯದಂಥ ಭಯಂಕರ ರೋಗವನ್ನು ಎದುರಿಸಿ ಗೆದ್ದ.

 ಆರ್ಥರ್ ಕೀತ್ 1908ಕ್ಕೆ ಮೊದಲು ಲಂಡನ್ ಆಸ್ಪತ್ರೆಯಲ್ಲಿ ಅಧ್ಯಾಪಕನಾಗಿದ್ದುದಲ್ಲದೆ, ರಾಯಲ್ ಕಾಲೇಜ್ ಆಫ್ ಸರ್ಜನ್ಸ್‍ಗೆ ಸಂಬಂಧಿಸಿದ ವಸ್ತುಸಂಗ್ರಹಾಲಯದ ಸಂರಕ್ಷಣಾಧಿಕಾರಿಯಾಗಿ 1908ರಿಂದ 1933ರ ವರೆಗೆ ಸೇವೆ ಸಲ್ಲಿಸಿದ. ಇವನ ಉಪನ್ಯಾಸಗಳು ಯಾವಾಗಲೂ ಜನಪ್ರಿಯವಾಗಿದ್ದು ವೈದ್ಯರನ್ನಷ್ಟೇ ಅಲ್ಲ, ವಿದ್ಯಾವಂತ ಜನಸಾಮಾನ್ಯರನ್ನೂ ಆಕರ್ಷಿಸುತ್ತಿದ್ದುವು. ಅಂಗರಚನಾಶಾಸ್ತ್ರದಲ್ಲಿ ಕೀತನಿಗಿದ್ದ ಪಾಂಡಿತ್ಯ ಆತ ಬರೆದಿರುವ ಅನೇಕಾನೇಕ ಲೇಖನಗಳು ಮತ್ತು ಗ್ರಂಥಗಳಲ್ಲಿ ವ್ಯಕ್ತವಾಗಿದೆ. ಡಾರ್ವಿನ್ನನ ವಿಕಾಸವಾದದಲ್ಲಿ ಆತನಿಗೆ ಅಚಲ ವಿಶ್ವಾಸವಿತ್ತು.

 ಅತ್ಯಂತ ಉಪಯುಕ್ತವಾದ ಅಧ್ಯಯನವನ್ನು ಕೀತ್ ನಡೆಸಿದ್ದು ತನ್ನ ನಿವೃತ್ತ ಜೀವನಾವಧಿಯಲ್ಲಿ. ಟಿ.ಡಿ.ಮೆಕಾನನೊಂದಿಗೆ ಕೀತ್ ತಲೆಬುರುಡೆಗಳ ರಚನೆಯ ವಿಷಯದಲ್ಲಿ ಸುದೀರ್ಘ ಸಂಶೋಧನೆ ನಡೆಸಿದ. ಕೀತ್‍ನ ಪ್ರತಿಭೆ ಆತನ ಲೇಖನ ಮತ್ತು ಗ್ರಂಥಗಳಿಂದ ಮಾತ್ರವಲ್ಲದೆ ವೈದ್ಯಕೀಯ ವಸ್ತು ಸಂಗ್ರಹಣಾಲಯದ ನಿರ್ವಹಣೆಯಲ್ಲಿ ಆತ ತೋರಿದ ಕ್ರತುಶಕ್ತಿಯಿಂದಲೂ ವ್ಯಕ್ತವಾಗುತ್ತದೆ. ಜನಾಕರ್ಷಕ ಕೇಂದ್ರವಾಗುವುದರ ಜೊತೆಗೆ ಆ ವಸ್ತುಸಂಗ್ರಹಾಲಯ ಒಂದು ಶೈಕ್ಷಣಿಕ ಹಾಗೂ ಸಂಶೋಧನ ಕೇಂದ್ರವಾಗುವಂತೆ ಮಾಡುವುದರಲ್ಲಿ ಆತ ಯಶಸ್ವಿಯಾದ.

 ಕೀತ್ ಮಾನವಜನಾಂಗದ ಬಗ್ಗೆ ಅತ್ಯಂತ ಉದಾತ್ತವಾದ ಕಲ್ಪನೆಗಳನ್ನು ಹೊಂದಿದ್ದ. ಯುದ್ಧಗಳು ಮಾನವೀಯ ಹಾಗೂ ಸಾಮಾಜಿಕ ವಿಕಾಸಕ್ಕೂ ನೀತಿನಿಯಮಗಳ ಬೆಳೆವಣಿಗೆಗೂ ಮಾರಕವಾಗಿವೆಯೆಂದು ಆತ ಪ್ರತಿಪಾದಿಸುತ್ತಿದ್ದರು.

 1914 ರಿಂದ 1918ರ ವರೆಗೆ ಕೀತ್ ರಾಯಲ್ ಆಂತ್ರೊಪೊಲಾಜಿಕಲ್ ಸಂಸ್ಥೆಯ ಅಧ್ಯಕ್ಷನಾಗಿದ್ದ. 1921ರಲ್ಲಿ ಆತನಿಗೆ ಸರ್ ಪದವಿಯನ್ನು ನೀಡಿ ಗೌರವಿಸಲಾಯಿತು. 1928ರಲ್ಲಿ ಆತ ಹಕ್‍ಸ್ಲೆ ಸ್ಮಾರಕ ಉಪನ್ಯಾಸಗಳನ್ನಿತ್ತ. ಕೀತ್‍ನ ಬರೆವಣಿಗೆಯಲ್ಲಿ ಈ ಕೆಳಗಿನವು ಮೂಖ್ಯವಾದವು: ಹ್ಯೂಮನ್ ಎಂಬ್ರಿಯಾಲಜಿ ಅಂಡ್ ಮಾರ್ಫಾಲಜಿ (1901), ಏನ್ಷಂಟ್ ಟೈಪ್ಸ್ ಆಫ್ ಮ್ಯಾನ್ (1911), ಡಿ. ಹ್ಯೂಮನ್ ಬಾಡಿ (1912), ಆಂಟಿಕ್ವಿಟಿ ಆಫ್ ಮ್ಯಾನ್ (1915), ಎಂಜಿನ್ಸ್ ಆಫ್ ದಿ ಹ್ಯೂಮನ್ ಬಾಡಿ (1919), ನ್ಯೂ ಡಿಸ್ಕವರೀಸ್ ರಿಲೇಟಿಂಗ್ ಟು ದಿ ಆಂಟಿಕ್ವಿಟಿ ಆಫ್ ಮ್ಯಾನ್ (1931), ಎ ನ್ಯೂ ಥಿಯರಿ ಆಫ್ ಎವೂಲ್ಯೂಷನ್ (1948). ಎನ್ ಆಟೋಬಯಾಗ್ರಫಿ (1950).

 

(ಬಿ.ಎನ್.ಎ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ